ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಾಗಾರ

ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ 24-09-2018 ರಂದು ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕೋಲಾರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಎನ್.ಎಸ್.ಮಮದಾಪುರ್‍ ರವರು ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪಟ್ ರವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು. ಗೌರವ ಅತಿಥಿಗಳಾಗಿ ಶ್ರೀ ಗುರುರಾಜ್ ಜಿ.ಶಿರೋಳ್ ಸದಸ್ಯ ಕಾರ್ಯದರ್ಶಿಗಳು, ಡಿ.ಎಲ್.ಎಸ್.ಎ ರವರು ಆಗಮಿಸಿದ್ದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಕುಮಾರ್‍ ರವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಕೋಲಾರ ನಗರದ ಹಲವು ಶಾಲೆಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಈ ಸಂಬಂಧ ಕಾನೂನಿನ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಜಾಗೃತಿಯನ್ನು ಶಾಲಾ ವಿದ್ಯಾರ್ಥಿಗಳಿಗೆ ಮೂಡಿಸಲಾಯಿತು. ಈ ಬಗ್ಗೆ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ತಯಾರಿಸಲಾದ ಸಾಕ್ಷ್ಯಚಿತ್ರವನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಎನ್.ಎಸ್.ಮಮದಾಪುರ್‍ ರವರು ಬಿಡುಗಡೆ ಮಾಡಿದರು.

ಇದೇ ಸಂಧರ್ಭದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಬೀಟ್ ವ್ಯವಸ್ಥೆಯನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಜಿ.ಪಿ.ಎಸ್ ಆಧಾರಿತ ಆಂಡ್ರಾಂಯ್ಡ್ ಅಪ್ಲಿಕೇಶನ್ ಸುಬಾಹು ಇ-ಬೀಟ್ ತಂತ್ರಾಂಶವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಪೊಲೀಸ್ ಸಿಬ್ಬಂದಿಗಳಿಗೆ ಈ ಸಂಬಂಧ ತಂತ್ರಾಂಶವನ್ನು ಒಳಗೊಂಡ ಮೊಬೈಲ್ ಫೋನ್ ಗಳನ್ನು ನೀಡುವುದರ ಮೂಲಕ ಹೊಸ ಇ-ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು.

ಇತ್ತೀಚೆಗೆ ಮಾಲೂರಿನಿಂದ ವರದಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಕೊಲೆ ಪ್ರಕರಣದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ನಿರ್ವಹಿಸಿದ, ಆರೋಪಿಯನ್ನು ಪತ್ತೆ ಹಚ್ಚಿದ ಸಿಬ್ಬಂದಿಯವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದ ನಂತರ ಜಿಲ್ಲಾ ಶಾಲಾ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಹೊರಡುವ ಮೂಲಕ ನಾಗರೀಕರಿಗೆ ಮಾದಕ ವ್ಯಸನದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *